ದುಃಖದ ಮಡಿಲಲ್ಲಿ ಜನತೆ
ಆದರೆ ಈಗ ಇದೇ 26 ರಂದು ರಾತ್ರಿ 7.45 ರ ಸುಮಾರಿಗೆ ಬಳ್ಳಾರಿಯಲ್ಲಿ ಆರು ಅಂತಸ್ಥಿನ ಕಟ್ಟಡವೊಂದು ಕುಸಿದುಹೋಯಿತು. ಅದರೊಳಗಿದ್ದ ಸುಮಾರು 50 ರಷ್ಟು ಕಾರ್ಮಿಕರು ನೆಲದೊಳಗೆ ಹೂತುಹೋದರು. ಕಟ್ಟಡ ಕುಸಿದಿದ್ದರಿಂದ ಕಂಬ, ಇತರೆ ವಸ್ತುಗಳು ಪಕ್ಕದಲ್ಲಿಯೇ ಇದ್ದ ಬಿ.ಸಿ.ಎಂ. ಸರ್ಕಾರಿ ಹಾಸ್ಟೆಲ್ ಮೇಲೆ ಬಿದ್ದು ವಿದ್ಯಾರ್ಥಿಗಳು ವಿಲವಿಲನೆ ಒದ್ದಾಡಿದರು, ಸಹಾಯಕ್ಕೆ ಅಂಗಲಾಚಿದರು. ಆದರೆ ಯಾರೂ ಬರಲಿಲ್ಲ. ಅಂಗೈಗಳಲ್ಲೇ ಎತ್ತಿಹಿಡಿದು ಆಸ್ಪತ್ರೆಗೆ ವಿದ್ಯಾರ್ಥಿಗಳು ಓಡುತ್ತಿರುವಾಗಲೇ ಹಾದಿಯಲ್ಲೇ ಶಿರುಗುಪ್ಪದ ವಿದ್ಯಾರ್ಥಿ ಅಚ್ಚೊಳ್ಳಿಯ ರುದ್ರಗೌಡ (18) ಮೃತಪಟ್ಟ. ತಲೆಗೆ ತೀವ್ರ ಗಾಯವಾಗಿ ಆಸ್ಪತ್ರೆ ಸೇರಿದ್ದ ಸಂಡೂರು ತಾಲ್ಲೂಕಿನ ಉಬ್ಬಲಗಂಡಿ ಗ್ರಾಮದ ಪಿಯುಸಿ ವಿದ್ಯಾರ್ಥಿ ಎಸ್.ಮಹೇಂದ್ರ(17) ಕೊನೆಯುಸಿರೆಳೆದ. ಹಲವು ವಿದ್ಯಾರ್ಥಿಗಳು ಆಸ್ಪತ್ರೆಯಲ್ಲಿದ್ದರು. ಅತ್ತ ಕುಸಿದ ಕಟ್ಟಡದಡಿ ಸಿಕ್ಕ ಕಾರ್ಮಿಕರನ್ನು ಉಳಿಸಲು ಕಾಯರ್ಾಚರಣೆ ಏನೋ ಆರಂಭವಾಯಿತು. ಆದರೆ ಅನುಭವದ ಮಿತಿ, ಪರಿಕರಗಳ ಕೊರತೆ ಮತ್ತು ಕಟ್ಟಡದ ಸ್ಥಿತಿ ಅರಿಯಲಾಗದೇ ಮರುದಿನಕ್ಕೆ ಮುಂದೂಡಲಾಯಿತು. ಈಗ ಕೆಲವು ಕಾರ್ಮಿಕರನ್ನು ರಕ್ಷಿಸಲಾಗಿದೆ. ಆದರೆ ತಳದಲ್ಲಿ ಸಿಕ್ಕವರಲ್ಲಿ 10 ಜನ ಸತ್ತಿದ್ದಾರೆ. ಇನ್ನು 20 ರಷ್ಟು ಕಾರ್ಮಿಕರು ಹೆಣವಾಗಿರುವ ಅನುಮಾನವಿದೆ. ಕಾರ್ಯಾಚರಣೆ ಮುಂದುವರಿದಿದೆ.
ಇಲ್ಲಿ ಸಿಕ್ಕಿ ಹಾಕಿಕೊಂಡ, ಸತ್ತ ಕುಟುಂಬಗಳ ಆಕ್ರಂದನ, ಪರಿತಾಪ ಎಂತಹವರ ಕರುಳನ್ನು ಹಿಂಡುವಂತಿದೆ. ಅದು ಹೃದಯವಿದ್ರಾವಕ ದೃಶ್ಯ. ಇಡೀ ಬಳ್ಳಾರಿ ನಗರ, ಜಿಲ್ಲೆ, ಹಾಗೆ ಅದನ್ನು ಮಾಧ್ಯಮಗಳಲ್ಲಿ ವೀಕ್ಷಿಸಿದ ರಾಜ್ಯದ ಜನತೆ ಮನ ಮಿಡಿಯದವರೇ ಇಲ್ಲ. ಬಳ್ಳಾರಿ ಜಿಲ್ಲೆಯಲ್ಲಂತೂ ಎಲ್ಲೆಲ್ಲೂ ಸೂತಕದ ಛಾಯೆ. ದು:ಖದ ಮಡಿಲಿನಲ್ಲಿ ಜನತೆ.
ಅದೆಂಥ ಸಂಭ್ರಮ?
ಆದರೆ ಅನತಿ ದೂರದಲ್ಲೇ ವಿಜಯನಗರದ ರಾಜ ಕೃಷ್ಣದೇವರಾಯನನ್ನು ಮೆರೆಸುವ, ಪಾಳೇಗಾರಿ ಪಳೆಯುಳಿಕೆಯನ್ನು ವಿಜೃಂಭಿಸಿ ಕೊಂಡಾಡುವ ಪ್ರಜಾಪ್ರಭುತ್ವ ವಿರೊಧಿ ಉತ್ಸವದ ಸಿದ್ಧತೆ ಭರದಿಂದಲೇ ನಡೆದಿತ್ತು. ಬಳ್ಳಾರಿಯಲ್ಲಿ ದುರಂತದ ನೆಲದಿಂದಲೇ ಉಸ್ತುವಾರಿ ಸಚಿವ ರೆಡ್ಡಿ ಬ್ರದರ್ಸ್ ಗಳನ್ನು ಮಾಧ್ಯಮದವರು ಕೇಳಿದರು. `ಉತ್ಸವ ಮುಂದೆ ಹಾಕುವಿರಾ?' ಇದು ಸಹಜ ಪ್ರಶ್ನೆ. ಆದರೆ ಸಚಿವ ಮಹಾಶಯರು ಸೌಜನ್ಯದ ಮಾತೂ ಆಡಲಿಲ್ಲ. `ಇಲ್ಲ. ಅದು ಯಥಾರೀತಿ ನಡೆಯುತ್ತದೆ' ಹಾಗೇ ನಡೆಸಿದರು. ಅಲ್ಲಿಗೆ ಬಂದಿದ್ದ ಮಹಾನ್ ಗಣ್ಯರು ಮುಖ್ಯಮಂತ್ರಿಯಾದಿಯಾಗಿ ರವಿಶಂಕರ್ ಗುರೂಜಿ, ರೆಡ್ಡಿಗಳ ಅಮ್ಮ ಸುಷ್ಮಾ ಇತ್ಯಾದಿ ಎಲ್ಲರೂ ರಾಜ ವೈಭವದ ಗುಂಗಿನಲ್ಲಿ ಇಂತಹ ಸೂತಕದ ಮನೆಯಲ್ಲಿ ಆಧುನಿಕ ಮಹಾರಾಜರದ್ದು ಅದೆಂತಹ ಸಂಭ್ರಮ!
ಯಾರ ಹಣ? ಎಲ್ಲಿಗೆ?
ನೆರೆ ಸಂತ್ರಸ್ಥರು ನೆರಳು, ನೀರಿಗೆ ಹಾಹಾಕಾರ ಪಡುತ್ತಿದ್ದಾರೆ. ಪುನರ್ವಸತಿಗೆ ಹಣದ ಕೊರತೆ ಎಂದು ಸರ್ಕಾರ ಹೇಳುತ್ತಿದೆ! ಆದರೆ ಕೃಷ್ಣದೇವರಾಯನ ಪಟ್ಟಾಭಿಷೇಕದ ಯೋಜನೆಗೆ ಏನಿಲ್ಲವೆಂದರೂ 114 ಕೋಟಿ ರೂ.ಗಳನ್ನು ಸರ್ಕಾರ ಮಂಜೂರು ಮಾಡಿದೆ. ಈಗ ಈ ಉತ್ಸವಕ್ಕೆಂದೇ 13 ಕೋಟಿ ನೀಡಿದೆ. ಇದು ಯಾರ ಹಣ? ಯಾರ ಜೇಬಿಗೆ? ಒಂದಿಷ್ಟು ಕನಿಷ್ಠ ಕಾಳಜಿ ಇದ್ದಿದ್ದರೆ, ಜನರಿಗೆ ನಿಷ್ಠವಾಗಿದ್ದರೆ ಹೀಗೆ ಮಾಡಲಾಗುತ್ತಿತ್ತೇ? ಇದು ಎಲ್ಲರ ಪ್ರಶ್ನೆ! ಹೌದು, ಇಂತಹ ಕಾರ್ಯಕ್ರಮದ ಅಗತ್ಯವೇನಿತ್ತು? ಔಚಿತ್ಯವೇನು?
ಜಯಕಾರದ ಎದುರು ಧಿಕ್ಕಾರ
ಅದನ್ನು ಮುಖ್ಯಮಂತ್ರಿಗಳೇ ಬಹಿರಂಗಪಡಿಸಿದರು. `ಇದು ಆರ್ ಎಸ್ಎಸ್ ಅಣತಿಯಂತೆ, ಒತ್ತಾಸೆಯಂತೆ ಮಾಡಲಾಗುತ್ತಿದೆ'. ಹೌದಲ್ಲ, ಹೇಳಿಕೇಳಿ ಸಂಘ ಪರಿವಾರಕ್ಕೆ ಆಧುನಿಕ ಪ್ರಜಾಪ್ರಭುತ್ವವೆಂದರೆ ಉರಿ. ಇಂತಹ ಕಾಲಬಾಹಿರವಾದ ಚಲನಶೀಲ ಸಮಾಜಕ್ಕೆ ಅಡ್ಡಿ ಕಲ್ಲುಗಳನ್ನು ಮೆರೆಸಿ, ಜನರನ್ನು ಅಂಧಯುಗದ ವಿರೂಪಕ್ಕೆ ಕರೆದೊಯ್ಯುವ ಉತ್ಸುಕತೆ ಸಂಘ ಪರಿವಾರಕ್ಕೆ. ಮಾತ್ರವಲ್ಲ, ಇತಿಹಾಸದ ಸತ್ಯಗಳನ್ನು ತಿರುಚಿ, ಇಲ್ಲ ಸೇರಿಸಿ ಅದಕ್ಕೆ ಕೋಮು ಬಣ್ಣ ಕಟ್ಟಿ ಜನತೆಯನ್ನು ಒಡೆಯುವ ತವಕ ಹುನ್ನಾರ ಬೇರೆ. ಹೀಗಾಗಿಯೇ ಅಂತಹುದೇ ವಿದ್ವಾಂಸರ ಸಂಗಮ, ಮೇಲಾಗಿ ಇದು ಸರ್ಕಾರದ ಕಾರ್ಯಕ್ರಮವಾದರೂ ಎಲ್ಲಾ ಪ್ರಜಾಪ್ರತಿನಿಧಿ, ಪಕ್ಷಗಳನ್ನು ಒಳಗೊಳಿಸದೇ ಆಡಳಿತ ಪಕ್ಷದ, ಅದರ ವಂಧಿಮಾಗದರ ಜಾತ್ರೆ. ಇಂತಹ ಟೀಕೆ ಬರಬಾರದೆಂದು ಕೇಂದ್ರಸಚಿವ ಚಿದಂಬರಂ ರಿಂದ ಪುಸ್ತಕ ಬಿಡುಗಡೆ ಮಾಡಿಸಿದ್ದಾರೆ. ಇಲ್ಲಿ ಎಲ್ಲಾ ಸಂಘ ಪರಿವಾರದ ಆಶ್ರಮವಾಸಿಗಳನ್ನೇ ಅಣಿನೆರೆಸಿದ್ದಾರೆ. ಶಾಲಾಕಾಲೇಜುಗಳ ವಿದ್ಯಾರ್ಥಿಗಳಿಗೆ ಇತಿಹಾಸ ಪರಿಚಯಿಸುವ ಯೋಜನೆಯಲ್ಲಿ ಮತೀಯತೆಯ ವೈರಸ್ ಹುಳುಗಳನ್ನು ತಿಳಿನೀರಿನಂತಿರುವ ಅವರ ಮೆದುಳಿಗೆ ಬಿಡುತ್ತಿದ್ದಾರೆ. ಈ ಯೋಜನೆ, ಕಾರ್ಯಕ್ರಮ ಯಾವುದೂ ಪಾರದರ್ಶಕವಿಲ್ಲ. ಹೀಗೆ ಸಂಘ ಪರಿವಾರದ ಅಜೆಂಡಾ ಜಾರಿಗೆ ಇಡೀ ಸರ್ಕಾರವು ಜನತೆಯ ಸಂಪತ್ತನ್ನು, ಸಮಯದ ಅಪವ್ಯಯವನ್ನು ಮಾಡುತ್ತಿದೆ. ಆದ್ದರಿಂದಲೇ ರಾಜನಿಗೆ ಆಧುನಿಕ ಮಹಾರಾಜರು, ಚಾತುರ್ವಣ್ಯ ಪ್ರವೀಣರು ಜಯಕಾರ ಹಾಕುತ್ತಿದ್ದಾರೆ, ಜನರ ಮನಸ್ಸು ಧಿಕ್ಕಾರ ಕೂಗುತ್ತಿದೆ.
ಸೌಜನ್ಯ: ಜನಶಕ್ತಿ